ಮಂಗಳೂರು : ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಸಮುದಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಜಾತಿ ನಿಂದನೆ ನಡೆಸಿರುವ ಆರೋಪಿ ಮಹೇಶ್ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಪ್ರಮುಖರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಎರಡು ತಿಂಗಳಿನಿಂದ ಬಾಲಕಿ ಶಾಲೆಗೂ ಹೋಗಿಲ್ಲ. ಪರೀಕ್ಷೆಗೂ ಹಾಜರಾಗಿಲ್ಲ. ಈ ಕುರಿತು ವಿಚಾರಿಸಲು ಶಾಲೆಯ ಶಿಕ್ಷಕರು ಆಕೆಯ ಮನೆಗೆ ತೆರಳಿದಾಗ ಪೋಷಕರು ಬಾಲಕಿಯನ್ನು ಮಾತಾಡಿಸಲು ಬಿಟ್ಟಿರಲಿಲ್ಲ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಸಂದೇಹಗಳೂ ಇವೆ. ದೌರ್ಜನ್ಯಕ್ಕೊಳಗಾದ ಬಾಲಕಿ ಅಸ್ಥ್ವಸ್ಥ ಗೊಂಡಿರುವುದು, ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿರುವುದು ನಾಗರಿಕರ ಅನುಮಾನಗಳನ್ನು ಪುಷ್ಟೀಕರಿಸುತ್ತಿವೆ. ರಾಜಕೀಯವಾಗಿ ಬಲಾಢ್ಯನಾಗಿರುವ ಆರೋಪಿ ಮಹೇಶ್ ಭಟ್ ನ ಬೆದರಿಕೆಗೆ ಅಂಜಿ ಹೆತ್ತವರು ಸತ್ಯವನ್ನು ಮುಚ್ಚಿಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆಗೊಳಪಡಿಸುವ ಅವಶ್ಯಕತೆ ಇದೆ ಎಂದು ಎಂದು ಈ ಸಂಘಟನೆಗಳ ಪ್ರಮುಖರು ಜಿಲ್ಲಾ ಪೊಲೀಸ್ ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಲೈಂಗಿಕ ಕಿರುಕುಳ ನೀಡಿ ಕೆಲವು ತಿಂಗಳುಗಳು ಕಳೆದಿವೆ. ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿರುವ ಆರೋಪಿ ಮಹೇಶ್ ಭಟ್ ಈ ಲೈಂಗಿಕ ಕಿರುಕುಳದ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಬೆದರಿಕೆಯನ್ನು ಒಡ್ಡಿದ್ದಾನೆ. ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ ಹಾಗೂ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣದಾಖಲಾಗದ್ದರೂ ಆರೋಪಿಯ ಬಂಧನವಾಗಿಲ್ಲ. ಯಾವ ಒತ್ತಡಕ್ಕೂ ಮಣಿಯದೆ ತಕ್ಷಣ ಬಂಧಿಸಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಸಂಘಟನೆಗಳು ಕೋರಿವೆ.
ಬಾಲಕಿಗೆ ಕಿರುಕುಳ : ಆರೋಪಿಯ ಬಂಧನಕ್ಕೆ ಒತ್ತಾಯ
